ಗೇ - ಲ್ಯೂಸ್ಯಾಕ್, ಜೋಸೆಫ್ ಲೂಯಿ	
	1778-1850. ಫ್ರಾನ್ಸ್ ದೇಶದ ರಸಾಯನ ವಿಜ್ಞಾನಿ. ಅನಿಲಗಳ ಗುಣಗಳನ್ನು ಅನ್ವೇಷಿಸುವುದರಲ್ಲಿ ಇವನು ಮಹತ್ತ್ವದ ಪಾತ್ರವನ್ನು ವಹಿಸಿ ಗೇ-ಲ್ಯೂಸ್ಯಾಕ್ ನಿಯಮವನ್ನು ಆವಿಷ್ಕರಿಸಿದ (1809). ನಿರ್ದಿಷ್ಟ ಒತ್ತಡ ಮತ್ತು ಉಷ್ಣತೆಗಳಲ್ಲಿ ಅನಿಲಗಳು ಒಂದರೊಡನೊಂದು ಸಂಯೋಗಿಸುವಾಗ ನಿರ್ದಿಷ್ಟ ಸರಳಾನುಪಾತಗಳಲ್ಲಿ ಸಂಯೋಗಿಸುವುವು ; ಮತ್ತು ಫಲಿಸುವ ಹೊಸ ಅನಿಲದ / ಅನಿಲಗಳ ಗಾತ್ರ ಈ ಕ್ರಿಯೆಯಲ್ಲಿ ಭಾಗವಹಿಸಿದ ಅನಿಲಗಳ ಗಾತ್ರಗಳಿಗೆ ಸರಳಾನುಪಾತದಲ್ಲಿರುತ್ತದೆ. ಎಂಬುದೇ ಈ ನಿಯಮದ ನಿರೂಪಣೆ. ಉದಾಹರಣೆಗೆ ಹೈಡ್ರೊಜನಿನ ಎರಡು ಅಂಶಗಳು ಆಕ್ಸಿಜನಿನ ಒಂದು ಅಂಶದೊಡನೆ ಸೇರಿ ನೀರು (ಊ2ಔ) ದೊರೆಯುತ್ತದೆ. ಹೈಡ್ರೊಜನಿನ ಒಂದು ಅಂಶ ಕ್ಲೋರಿನಿನ ಒಂದು ಅಂಶದೊಡನೆ ಸೇರಿ ಹೈಡ್ರೊಜನ್ ಕ್ಲೋರೈಡ್ (ಊಅಟ) ಆಗುತ್ತದೆ ; ಹೈಡ್ರೊಜನಿನ ಮೂರು ಅಂಶಗಳು ನೈಟ್ರೊಜನಿನ ಒಂದು ಅಂಶದೊಡನೆ ಸೇರಿ ಅಮೋನಿಯ (ಓಊ3) ಲಭಿಸುತ್ತದೆ; ಇತ್ಯಾದಿ. ಸಂಯೋಗಿಸುವ ಘನಗಾತ್ರಗಳನ್ನು ಕುರಿತ ಈ ನಿಯಮವನ್ನು ಆವಿಷ್ಕರಿಸುವಲ್ಲಿ ಸುವಿಖ್ಯಾತ ನೈಸರ್ಗಿಕ ವಿಜ್ಞಾನಿ ಹಂಬೋಲ್ಟ್‍ನಿಂದ ಗೇ-ಲ್ಯೂಸ್ಯಾಕನಿಗೆ ದೊರೆತ ಸಹಕಾರ ಅಮೂಲ್ಯ. ಅದೇ ವರ್ಷ (1809) ಹಂಬೋಲ್ಟನೊಡಗೂಡಿ ನೀರನ್ನು ವಿದ್ಯುದ್ವಿಶ್ಲೇಷಿಸಿ ಅದು ಹೈಡ್ರೊಜನ್ ಮತ್ತು ಆಕ್ಸಿಜನುಗಳ ಸಂಯೋಗದಿಂದ ಆದುದೆಂದು ಗೇ-ಲ್ಯೂಸ್ಯಾಕ್ ಖಚಿತಪಡಿಸಿದ. ಈತ ಪೊಟ್ಯಾಸಿಯಮ್ ಕಾರ್ಬೊನೇಟ್ ಲವಣದಿಂದ ಪೊಟಾಸಿಯಮ್ ಧಾತುವನ್ನು ತಯಾರಿಸಿದ್ದು 1808 ರಲ್ಲಿ. ಬಳಿಕ ಹೈಡ್ರೊಸಯನಿಕ್ ಆಮ್ಲದಲ್ಲಿ ಆಕ್ಸಿಜನ್ ಇಲ್ಲವೆಂದು ಸಿದ್ಧಪಡಿಸಿ ಆಮ್ಲಗಳಲ್ಲಿ ಅವಶ್ಯಕ ಧಾತು ಆಕ್ಸಿಜನ್ ಅಲ್ಲ. ಹೈಡ್ರೊಜನ್ ಎಂಬ ಸಿದ್ಧಾಂತಕ್ಕೆ ಪುಷ್ಟಿ ನೀಡಿದ. ಹುದುಗುವಿಕೆಯ ವಿಧಾನಗಳಲ್ಲೂ ಆಗ್ರ್ಯಾನಿಕ್ ಸಂಯುಕ್ತಗಳ ಪರೀಕ್ಷೆ, ವಿಶ್ಲೇಷಣ ವಿಧಾನಗಳ ಬಗ್ಗೆಯೂ ಸಂಶೋಧನೆಯನ್ನು 1810-15 ರ ಅವಧಿಯಲ್ಲಿ ನಡೆಸಿದ. ಮೊದಲ ಬಾರಿಗೆ ಸಯನೋಜನ್ ಮತ್ತು ಬೋರಾನುಗಳನ್ನು ತಯಾರಿಸಿದ ಕೀರ್ತಿ ಸಹ ಗೇ-ಲ್ಯೂಸ್ಯಾಕನದು. ಔದ್ಯಮಿಕ ರಂಗದಲ್ಲಿಯೂ ಈತನ ಸಂಶೋಧನೆಗಳು ಗಣನೀಯವಾದವು. ಅನೇಕ ಉದ್ಯಮಗಳಿಗೆ ಅವನು ಸಲಹೆಗಾರನಾಗಿದ್ದ. ಸಲ್ಫ್ಯೂರಿಕ್ ಮತ್ತು ಆಕ್ಸ್ಯಾಲಿಕ್ ಆಮ್ಲಗಳ ತಯಾರಿಕಾ ವಿಧಾನಗಳನ್ನು ಉತ್ತಮಗೊಳಿಸಿದ. ಚೆಲುವೆ (ಬ್ಲೀಚಿಂಗ್) ಪುಡಿಯಲ್ಲಿ ಕ್ಲೋರಿನ್ ಅಂಶವನ್ನೂ ಪೊಟಾಷಿನಲ್ಲಿ ಪೊಟಾಸಿಯಮ್ ಅಂಶವನ್ನು ತಿಳಿಯುವ ವಿಧಾನಗಳನ್ನು ಕಂಡುಹಿಡಿದ. ಖನಿಜಗಳಲ್ಲಿ ಬೆಳ್ಳಿಯ ಅಂಶವನ್ನು ತಿಳಿಯುವುದಕ್ಕೆ ವಿಧಾನವೊಂದನ್ನು ಯೋಜಿಸಿದ. ಸಂಶೋಧಕನಾಗಿ ಗೇ-ಲ್ಯೂಸ್ಯಾಕ್ ಸೇವೆ ಸಲ್ಲಿಸಿದ ಸುಮಾರು 50 ವರ್ಷಗಳಲ್ಲಿ ಹಂಬೋಲ್ಟ್, ಥೆನಾರ್ಡ್, ಲೀಬಿಗ್ ಮತ್ತು ವಾಲ್ಟರ್ ಅವರೊಡನೆ ಕೂಡಿ ಪ್ರಕಟಿಸಿದ ಬರಹಗಳಲ್ಲದೆ ಸ್ವತಂತ್ರವಾಗಿ 148 ಸಂಶೋಧನ ಪ್ರಬಂಧಗಳನ್ನು ಕೂಡ ಪ್ರಕಟಿಸಿದ್ದಾನೆ. ಫ್ರಾನ್ಸಿನ ಸೇಂಟ್ ಲಿಯೊನಾರ್ಡ್ ಎಂಬಲ್ಲಿ 1778 ರ ಡಿಸೆಂಬರ್ 6 ರಂದು ಗೇ-ಲ್ಯೂಸ್ಯಾಕ್ ಜನಿಸಿದ. ಮೂಲ ವಿದ್ಯಾಭ್ಯಾಸದ ಬಳಿಕ ಹಲವುಕಾಲ ರಸಾಯನಶಾಸ್ತ್ರಜ್ಞ ಕ್ಲಾಡ್ ಬರ್ತೋಲೆಟನ ಸಹಾಯಕನಾಗಿ ಕೆಲಸ ಮಾಡಿದ. 1802 ರಲ್ಲಿ ತನ್ನ ಊರಿನ ಪಾಲಿಟೆಕ್ನಿಕ್ ಶಾಲೆಯಲ್ಲಿ ನಿದರ್ಶಕೋಪಾಧ್ಯಾಯನಾಗಿ ನೇಮಕಗೊಂಡು 1809 ರಲ್ಲಿ ಅಲ್ಲಿಯೇ ರಸಾಯನಶಾಸ್ತ್ರ ಪ್ರಾಧ್ಯಾಪಕನಾದ. 1808 ರಿಂದ 1832 ರ ವರೆಗೆ ಸಾರ್ಬೋನಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕನಾಗಿಯೂ ಸೇವೆ ಸಲ್ಲಿಸಿದ. 1832 ರಲ್ಲಿ ಸಾರ್ಬೋನ್ ಬಿಟ್ಟು ಯಾರ್ಡಿನ ಡೆಪ್ಲಾಂಟೆಸಿನಲ್ಲಿ ರಸಾಯನಶಾಸ್ತ್ರ ಪ್ರಾಧ್ಯಾಪಕನಾದ. 1806 ರಲ್ಲಿ ಅವನಿಗೆ ಅಕಡೆಮಿಷಿಯನ್ ಗೌರವವೂ ಹಾಯ್ಟೆವಿಯನ್ನೆಯಲ್ಲಿನ ಛೇಂಬರ್ ಆಫ್ ಡೆಪ್ಯುಟೀಸಿನಲ್ಲಿ ಸದಸ್ಯತ್ವವೂ ದೊರೆತವು. 1839 ರಲ್ಲಿ ಛೇಂಬರ್ ಆಫ್ ಪೀರ್ಸಿನಲ್ಲಿ ಸದಸ್ಯತ್ವ ದೊರೆಯಿತು. ಈತನ ಮೊದಲ ಸಂಶೋಧನೆಗಳು ಅನಿಲಗಳ ಗುಣಗಳು ಮತ್ತು ವಾತಾವರಣವನ್ನು ಕುರಿತವು. ವಾಯುಮಂಡಲದಲ್ಲಿನ ಕಾಂತತ್ವದ ಬಗ್ಗೆ ಅಭ್ಯಾಸಕ್ಕೆ 1804 ರಲ್ಲಿ ತೊಡಗಿದ. ಬೆಲೂನುಗಳ ನೆರವಿನಿಂದ ಸುಮಾರು 20,000' ಎತ್ತರದವರೆಗೂ ಏರಿ ಅಲ್ಲಿನ ಉಷ್ಣತೆ ಆದ್ರ್ರತೆ ಮತ್ತು ಅಲ್ಲಿರುವ ಅನಿಲಗಳು ಹಾಗೂ ಅವುಗಳ ಪ್ರಮಾಣಗಳ ಬಗ್ಗೆ ಸಂಶೋಧನೆ ನಡೆಸಿದ.

	1850 ರ ಮೇ 9 ರಂದು ಪ್ಯಾರಿಸಿನಲ್ಲಿ ಅಸುನೀಗಿದ.
(ಕೆ.ಟಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ